ಶಾಂತಾ ವಸಿಷ್ಠ (ಜನನ ೧೯೨೬ ) ಅವರು ಭಾರತದ ರಾಜಕಾರಣಿ. ೧೯೫೦ ಮತ್ತು ೧೯೬೦ ರ ದಶಕದಲ್ಲಿ ಅವರು ದೆಹಲಿಯ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. == ವಿದ್ಯಾಭ್ಯಾಸ == ವಸಿಷ್ಠ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಆಕೆಯ ತಂದೆ ಎಲ್‌.ಡಿ. ವಸಿಷ್ಠ ಅವರು ರಕ್ಷಣಾ ಸಚಿವಾಲಯದ ಮುಖ್ಯ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ದೆಹಲಿ ಶಾಖೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಕಿಂಗ್ಸ್‌ವೇ ನಿರಾಶ್ರಿತರ ಸಮಿತಿಯೊಂದಿಗೆ ಕೆಲಸ ಮಾಡಿದ್ದರು. ೧೯೫೦ರಲ್ಲಿ ಅವರು ಕಪ್ಪಾ ಆಲ್ಫಾ ಥೀಟಾ ಸೊರೊರಿಟಿಯ ವಿದೇಶಿ ವಿದ್ಯಾರ್ಥಿ ವಿದ್ಯಾರ್ಥಿವೇತನದ ಮೂಲಕ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯವನ್ನು ಅಧ್ಯಯನ ಮಾಡಿದರು. == ದೆಹಲಿ ವಿಧಾನಸಭೆ == ಭಾರತಕ್ಕೆ ಹಿಂದಿರುಗಿದ ನಂತರ, ವಸಿಷ್ಠ ೧೯೫೨ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೋಟ್ಲಾ ಫಿರೋಜ್ ಷಾ ಕ್ಷೇತ್ರದಲ್ಲಿ ವಸಿಷ್ಠ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಭಾರತೀಯ ಜನಸಂಘದ ವಿ.ಪಿ. ಜೋಶಿ ಅವರನ್ನು ಪರಾಭವಗೊಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಟ್ಟಾರೆಯಾಗಿ ವಸಿಷ್ಠ ಅವರು ೪,೬೪೬ ಮತಗಳನ್ನು ಪಡೆದರು (ಕ್ಷೇತ್ರದಲ್ಲಿ ೫೬.೨೬% ಮತಗಳು). ೧೯೫೩ ರಲ್ಲಿ ದೆಹಲಿಯ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಅವರು ದೆಹಲಿ ರಾಜ್ಯ ಸರ್ಕಾರದಲ್ಲಿ ಇವರನ್ನು ಶಿಕ್ಷಣ ಖಾತೆಯ ಉಪ ಮಂತ್ರಿಯಾಗಿ ನೇಮಕಗೊಳಿಸಿದ್ದರು. ಅವರ ನಾಮನಿರ್ದೇಶನವನ್ನು ದೆಹಲಿಯ ಕಾಂಗ್ರೆಸ್ ಶಾಸಕಾಂಗ ಪಕ್ಷದೊಳಗಿನ ಅಲ್ಪಸಂಖ್ಯಾತರ ಬಣ ಟೀಕಿಸಿತ್ತು. ಮುಖ್ಯಮಂತ್ರಿ ಅವರು ಪಕ್ಷದ ವಿಧಾನಸಭಾ ಸದಸ್ಯರನ್ನು ಸಂಪರ್ಕಿಸದೇ ಉಪ ಮಂತ್ರಿಗಳನ್ನು ನಾಮನಿರ್ದೇಶನ ಮಾಡಬಾರದು ಎಂದು ಪ್ರತಿಪಾದಿಸಿದ್ದರು. ವಸಿಷ್ಠರು ೧೯೫೪ ರಲ್ಲಿ ದೆಹಲಿ ಲೈಬ್ರರಿ ಅಸೋಸಿಯೇಶನ್‌ನ ಪುನರುಜ್ಜೀವನದಲ್ಲಿ ಭಾಗವಹಿಸಿದ್ದರು. ಸಂಘದ ಸುದೀರ್ಘ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. == ರಾಜ್ಯಸಭೆ == ವಸಿಷ್ಠರು ೧೯೬೦ ರಲ್ಲಿ ರಾಜ್ಯಸಭೆಗೆ ( ಭಾರತದ ಸಂಸತ್ತಿನ ಮೇಲ್ಮನೆ) ಚುನಾಯಿತರಾಗಿದ್ದರು. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರ ಸರ್ಕಾರಗಳ ಅಡಿಯಲ್ಲಿ ಅವರ ಅವಧಿಯು ೩ ಏಪ್ರಿಲ್ ೧೯೬೦ ರಿಂದ ೨ ಏಪ್ರಿಲ್ ೧೯೬೬ ರವರೆಗೆ ಇತ್ತು. == ನಂತರದ ಅವಧಿ == ೨೦೦೮ರಲ್ಲಿ ವಸಿಷ್ಠ ನೆಹರು ಟು ಇರಾಕ್ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು. ಇದು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಅನುಭವಗಳನ್ನು ವಿವರಿಸುತ್ತದೆ. ೨೦೧೩ರ ಹೊತ್ತಿಗೆ, ವಸಿಷ್ಠರು ಸರ್ವೋದಯ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದರು. == ಉಲ್ಲೇಖಗಳು ==